ಕನ್ನಡ ನಾಡು | Kannada Naadu

ನಮ್ಮ ಕನ್ನಡ  ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಅದ್ಯ ಕರ್ತವ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

01 Nov, 2024

ಬೆಂಗಳೂರು, :  ನಮ್ಮ  ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ನಮ್ಮ ಕನ್ನಡ  ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಅದ್ಯ ಕರ್ತವ್ಯ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 69 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಾಡದೇವಿ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ಹಾಗೂ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಇಡೀ ಕರ್ನಾಟಕದಾದ್ಯಂತ ವಿಜೃಂಭಣೆಯಿಂದ 69 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ಕನ್ನಡ ನಾಡಿನ ಸಮಸ್ತ ಜನತೆಗೂ ಕನ್ನಡ ರಾಜ್ಯೋತ್ಸವದ ಶುಭಾಷಯ ಕೋರಿದರು.


 ಭಾಷೆಯನ್ನು ಬೆಳೆಸಿ ಉಳಿಸಲು ಮೊದಲು ಕನ್ನಡಿಗರಾಗಿ, ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸುವ ಮೂಲಕ ಕನ್ನಡ ವಾತಾವರಣವನ್ನು ನಿರ್ಮಿಸಿ ಎಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಕರ್ನಾಟಕದಲ್ಲಿ 200 ಕ್ಕೂ ಹೆಚ್ಚು  ಭಾಷೆಗಳಿದ್ದು, ಕನ್ನಡ, ಗಾಳಿ, ನೀರು, ಆಹಾರ ಸೇವೆನೆ ಮಾಡಿದ ಮೇಲೆ ನಾವೆಲ್ಲರೂ ಕನ್ನಡಿಗರು. ಕನ್ನಡ  ಭಾಷೆಗೆ 2000 ಕ್ಕೂ ಅಧಿಕ ಇತಿಹಾಸವಿದೆ. ಕೇಂದ್ರ ಸರ್ಕಾರ ಶಾಸ್ತ್ರೀಯ  ಭಾಷೆಯನ್ನಾಗಿ ಪರಿಗಣಿಸಿದೆ. ನಾವು ಯಾವುದೇ ಕಾರಣಕ್ಕೂ ಕನ್ನಡ  ಭಾಷೆಯನ್ನು ಬಲಿಕೊಟ್ಟು ಉದಾರಿಗಳಾಗಬಾರದು.  ಭಾಷೆಯ ವ್ಯಾಮೋಹ ಅತಿಯಾಗಬಾರದು, ಅದೇ ರೀತಿ ಕನ್ನಡ ಅಭಿಮಾನವನ್ನು ಬಿಟ್ಟುಕೊಡಬಾರದು.  ಭಾಷೆಯನ್ನು ಎತ್ತರಕ್ಕೆ ಬೆಳೆಸುವುದರ ಜೊತೆಗೆ ಬೇರೆ  ಭಾಷೆಯನ್ನು ಕಲಿತು ಭಾಷೆ ಸಂಪತ್ತನ್ನು ಬೆಳೆಸಿಕೊಂಡು ಕನ್ನಡ ಮಾತೆಯನ್ನು ಉತ್ತುಂಗಕ್ಕೇರಿಸಬೇಕು. ಮಹಾತ್ಮಗಾಂಧೀಜಿ ಅವರು ಹೇಳಿದಂತೆ ನಾವು ನಮ್ಮ ದೇಶ ಭಾಷೆಯಲ್ಲಿ ಶಿಕ್ಷಣ ಪಡೆದರೆ ಹೆಚ್ಚು ಶಕ್ತಿಯುತವಾಗಿ ಬೆಳೆಯುತ್ತೇವೆ ಎಂದು ಆಶಿಸಿದರು.

ಸುವರ್ಣ ಕರ್ನಾಟಕ ಸಂಭ್ರಮೋತ್ಸವ ಅಚರಣೆ :

ಕರ್ನಾಟಕ ಏಕೀಕರಣವಾಗಿ 68 ವರ್ಷ ಕಳೆದು, 69 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. 1947 ರಲ್ಲಿ ಭಾರತ ದೇಶ ಸ್ವಾತಂತ್ರ್ಯವಾದ ನಂತರ ನೂರಾರು ಸಂಸ್ಥಾನಗಳನ್ನು ಒಗ್ಗೂಡಿಸುವ ಕಾರ್ಯ ಯಶಸ್ವಿಯಾಗಿ ನಡೆಯಿತು. ಭಾಷಾವಾರು ಪ್ರಾಂತ್ಯಗಳನ್ನು ಗುರುತಿಸಿ 1956ರ ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾಯಿತು. 1973 ನವೆಂಬರ್ 1 ರವರೆಗೆ ಮೈಸೂರು ರಾಜ್ಯವಾಗಿದ್ದನ್ನು ಅಂದಿನ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರು ಇಡೀ ರಾಜ್ಯವನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಎಂದು 1973 ನವೆಂಬರ್ 1 ರಂದು ಮರುನಾಮಕರಣ ಮಾಡಿದರು. ತಾನು ಮುಖ್ಯಮಂತ್ರಿಯಾದ ನಂತರ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 2023 ನವೆಂಬರ್ 1 ರಂದು ಬಜೆಟ್‍ನಲ್ಲಿ ಇಡೀ ವರ್ಷ ಕರ್ನಾಟಕ ಸುವರ್ಣ ಸಂಭ್ರಮ ದಿನವನ್ನಾಗಿ ಆಚರಿಸಬೇಕೆಂದು ಘೋಷಣೆ ಮಾಡಲಾಯಿತು. ಕನ್ನಡ ನಾಡು, ನುಡಿ, ಸಂಸ್ಕಂತಿ, ಕಲೆ, ಪರಂಪರೆಯನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ “ಕರ್ನಾಟಕ ಸುವರ್ಣ ಸಂಭ್ರಮ”ವನ್ನು ಆಚರಿಸಲಾಗುತ್ತಿದೆ ಎಂದರು.

ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದೊಡನೆ ಸಮಸ್ತ ನಾಡಿನ ಜನರಿಗೆ ತಿಳಿಸಬೇಕೆಂದು ಅರ್ಥಪೂರ್ಣವಾಗಿ ಇಡೀ ವರ್ಷ ಆಚರಿಸಲಾಯಿತು. ಕನ್ನಡಿಗರಾಗಿ ಮಾತೃ  ಭಾಷೆಯನ್ನು ನಮ್ಮ ವ್ಯವಹಾರದಲ್ಲಿ ವ್ಯಾವಹಾರಿಕ  ಭಾಷೆಯನ್ನಾಗಿ ಮಾಡುವುದರ ಜೊತೆಗೆ ಕನ್ನಡ ಮಾತನಾಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು. ಕನ್ನಡೇತರರಿಗೂ ಕನ್ನಡವನ್ನು ಕಲಿಸಲು ಪ್ರಯತ್ನಿಸಬೇಕು ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದ್ದು, ಇದು ನಾಡ ದ್ರೋಹವಾಗಿದೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.


ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆಯಲ್ಲಿ ಅನ್ಯಾಯ:
ಕರ್ನಾಟಕಕ್ಕೆ ತೆರಿಗೆ ಪಾಲು ನೀಡುವುದರಲ್ಲಿ ಕೇಂದ್ರ ಸರ್ಕಾರದಿಂದ ಬಹಳ ಅನ್ಯಾಯವಾಗುತ್ತಿದೆ. ಇಡೀ ದೇಶದಲ್ಲೇ ಅತಿ ಹೆಚ್ಚು ತೆರಿಗೆ ನೀಡುವ ಎರಡನೇ ರಾಜ್ಯ ಕರ್ನಾಟಕವಾಗಿದೆ. ನಾವು 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ನೀಡಿದರೂ, ಕೇಂದ್ರದಿಂದ ದೊರೆಯುವ ತೆರಿಗೆ ಪಾಲು ಕೇವಲ 50 ರಿಂದ 60 ಸಾವಿರ ಕೋಟಿ ಮಾತ್ರ. ಅಂದರೆ ನಾವು ನೀಡುವ ಪ್ರತಿ ನೂರು ರೂಪಾಯಿಗೆ ಕೇಂದ್ರ ಸರ್ಕಾರ ಕೇವಲ ಹದಿಮೂರರಿಂದ ಹದಿನೈದು ಪೈಸೆ ಮಾತ್ರ. ರಾಜ್ಯಕ್ಕೆ ನ್ಯಾಯುತವಾಗಿ ಬರಬೇಕಾದ ತೆರಿಗೆ ಪಾಲನ್ನು ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡಲಾಗುತ್ತಿದೆ. ರಾಜ್ಯದ ಸಂಸದರು ಲೋಕಸಭೆಗೆ ಆಯ್ಕೆಯಾಗಿ ಹೋಗಿದ್ದು, ಲೋಕಸಭಾ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಧ್ವನಿ ಎತ್ತಬೇಕೆಂದರು ಕೇಂದ್ರದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರನ್ನು ಇದೇ ಸಂದರ್ಭದಲ್ಲಿ ಒತ್ತಾಯ ಮಾಡಿದರು.

ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಪೌಷ್ಠಿಕಾಂಶ ಆಹಾರ ನೀಡಲಾಗುತ್ತಿದೆ ಹಾಗೂ ಕನ್ನಡ ಸ್ಪಷ್ಟವಾಗಿ ಬರೆಯಲು ಮತ್ತು ಓದಲು ಬಾರದವರಿಗೆ ಕನ್ನಡ ಕಲಿಸುವ ಉದ್ದೇಶದಿಂದ “ಕನ್ನಡ ದೀವಿಗೆ” ಕಿರುಹೊತ್ತಿಗೆಯನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು.

ನಮ್ಮ ಕರ್ನಾಟಕ ನಮ್ಮ ಹೆಮ್ಮೆ - ಡಿ.ಕೆ.ಶಿ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ನಾವೆಲ್ಲರೂ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಕನ್ನಡ ಜ್ಯೋತಿ ಜಗಕ್ಕೆಲ್ಲ ಬೆಳಗು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಕರ್ನಾಟಕ ಹೆಸರಾಗಿ, ಉಸಿರಾಗಿ ಇಂದು 51 ವರ್ಷಕ್ಕೆ ಕಾಲಿಟ್ಟಿದ್ದೇವೆ. ನಮ್ಮ ಸ್ವರ್ಗವೇ ಕರ್ನಾಟಕವಾಗಿದ್ದು, ಕನ್ನಡವೇ ನಮ್ಮ ದೈವ  ಭಾಷೆ. ಕರ್ನಾಟಕದಲ್ಲಿ ತುಂಗಾ ಭದ್ರಾ, ಕಾವೇರಿ ನಮ್ಮ ಪಾಲಿಗೆ ಪುಣ್ಯ ತೀರ್ಥವಾಗಿದೆ. ನಮ್ಮ ಕರ್ನಾಟಕ ನಮ್ಮ ಹೆಮ್ಮೆಯಾಗಿದ್ದು, ಬದುಕು ನೀಡಿದ ಕನ್ನಡ ಮಾತೆಗೆ ನಮ್ಮ ನಮನ ಎಂದರು.

ಕನ್ನಡ  ಭಾಷೆಯನ್ನು ಬದುಕಿನ  ಭಾಷೆಯನ್ನಾಗಿಸುವುದು ನಮ್ಮ ಗುರಿ. ನಮ್ಮ ತಾಯ್ನಾಡಿಗೆ ಗೌರವ ಸಲ್ಲಿಸುವುದರೊಂದಿಗೆ ಈ ನೆಲಕ್ಕೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಕರ್ನಾಟಕ ಕೀರ್ತಿ ಪತಾಕೆ ಹಾರಿಸುವುದರ ಜೊತೆಗೆ ಬದುಕಿನ ಪ್ರತಿಯೊಂದು ಕ್ಷಣವೂ ಕನ್ನಡವೇ ನಮ್ಮ ಉಸಿರಾಗಿರಬೇಕು ಎಂಬ ಉದ್ದೇಶದಿಂದ ಈಗಾಗಲೇ ನಮ್ಮ ರಾಜ್ಯದಲ್ಲಿ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿಯ ಸಹ ಈ ವರ್ಷ ಎಲ್ಲಾ ಶಾಲಾ ಸಂಸ್ಥೆಗಳು ಖಾಸಗಿ ಸಂಸ್ಥೆಗಳು ಕನ್ನಡ ಬಾವುಟವನ್ನು ಹಾರಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ ಎಂದರು.

ನಮ್ಮ ರಾಜ್ಯದಲ್ಲಿ ನಾಡಿನ ಧ್ವಜ ಮತ್ತು ನಾಡಗೀತೆಗೆ ಬಹಳ ವಿಶೇಷವಿದೆ. ಯುವಕರು, ವಿದ್ಯಾರ್ಥಿಗಳು ಈ ದೇಶದ ಆಸ್ತಿಯಾಗಿದ್ದು, ಇಡೀ ವಿಶ್ವವೇ ನಮ್ಮನ್ನು ನೋಡುತ್ತಿದೆ. ತಾವೆಲ್ಲಾ ಎರಡು ಸಾವಿರ ವರ್ಷ ಇತಿಹಾಸವುಳ್ಳ ಕನ್ನಡ  ಭಾಷೆ, ನೆಲ, ಸಂಸ್ಕಂತಿ, ಕರ್ನಾಟಕದ ಖ್ಯಾತಿಯನ್ನು ಬೆಳೆಸುವುದರ ಜೊತೆಗೆ ನಮ್ಮ ನಾಡಿನ ಇತಿಹಾಸವನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್.ಮಧು ಬಂಗಾರಪ್ಪ ಮಾತನಾಡಿ, ನಮ್ಮ ಕರ್ನಾಟಕವು  ಭಾಷೆ, ಶಿಲ್ಪಕಲೆ, ಸಾಹಿತ್ಯ, ಸಂಸ್ಕಂತಿ, ನೆಲ, ಜಲ, ಸಂಪತ್ತುಗಳಿಂದ ಸಮೃದ್ಧವಾಗಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಲು ಎಲ್ಲಾ ಅವಕಾಶಗಳನ್ನು ಒದಗಿಸಿದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ  ಭಾಷೆಯಾಗಿದೆ. ಅದಕ್ಕಾಗಿ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಶಾಲಾ ಶಿಕ್ಷಣವನ್ನು ನೀಡಲು ಸತತ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ  ಭಾಷೆಯನ್ನು ಪ್ರಥಮ  ಭಾಷೆ ಅಥವಾ ದ್ವಿತೀಯ  ಭಾಷೆಯಾಗಿ ಭೋದಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 70 ಸಾವಿರಕ್ಕೂ ಹೆಚ್ಚು ಸರ್ಕಾರಿ, ಅನುದಾನಿತ ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 1 ಕೋಟಿ 4 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗಳ ಗುಣಮಟ್ಟ ಹೆಚ್ಚಿಸಲು ಹಲವು ನೂತನ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಕಾರ್ಯಕ್ರಮದ ಮೂಲಕ ಪ್ರತಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘ ಸ್ಥಾಪಿಸಲಾಗಿದೆ. ತಾವು ಕಲಿತ ಶಾಲೆಗಾಗಿ ನೆರವು ನೀಡಲು ಹಳೆಯ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಮುಂದೆ ಬಂದಿದ್ದಾರೆ ಎಂದರು.

ಮಕ್ಕಳು ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯವಂತರಾಗಿದ್ದರೆ ಅವರ ಕಲಿಕಾ ಸಾಮಥ್ರ್ಯ ಹೆಚ್ಚಾಗುತ್ತದೆ ಎಂಬ ಉದ್ದೇಶದಿಂದ ಸರ್ಕಾರ ಆ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡಿ, ಮಕ್ಕಳಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುವ ಸಲುವಾಗಿ ಈ ಹಿಂದೆ ಶಾಲೆಗಳಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ, ಚಿಕ್ಕೆ, ಬಾಳೆಹಣ್ಣು ನೀಡಲಾಗುತ್ತಿತ್ತು, ಈ ವರ್ಷದಿಂದ ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಯೋಗದೊಂದಿಗೆ ಶಾಲಾ ಶಿಕ್ಷಣ ಇಲಾಖೆಯು ವಾರದಲ್ಲಿ 6 ದಿನ ಮೊಟ್ಟೆ ನೀಡುತ್ತಿದೆ. ಈ ಹಿಂದೆ ವಾರದ ಐದು ದಿನಗಳು ಬಿಸಿ ಹಾಲು ನೀಡಲಾಗುತ್ತಿತ್ತು. ಕಳೆದ ಸಾಲಿನಿಂದ ಶ್ರೀ ಸತ್ಯಸಾಯಿ ಟ್ರಸ್ಟ್ ಸಹಯೋಗದಲ್ಲಿ ಹಾಲಿನೊಂದಿಗೆ ವಾರಕ್ಕೆ ಮೂರು ದಿನ ರಾಗಿ ಮಾಲ್ಟ್ ಸಹ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ವಿದ್ಯುತ್ ಮತ್ತು ನೀರು ಸೌಲಭ್ಯ ಜಾರಿಗೊಳಿಸಲಾಗಿದೆ ಎಂದರು.

ಸರ್ಕಾರಿ ಶಾಲೆಗಳ ನಿರ್ವಹಣಾ ಅನುದಾನವನ್ನು ಹೆಚ್ಚಿಸಲಾಗಿದ್ದು, ರೂ. 117 ಕೋಟಿಯನ್ನು ಖರ್ಚು ಮಾಡಲಾಗುತ್ತಿದೆ. ಕಾಪೆರ್ರೇಟ್ ಸಂಸ್ಥೆಗಳ ಸಿಎಸ್‍ಆರ್ ನಿಧಿಯಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮೊದಲ ಹಂತದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳು ಹಾಗೂ ಗ್ರೀನ್‍ಫೀಲ್ಡ್ ಯೋಜನೆಯಡಿ 100 ಶಾಲೆಗಳನ್ನು ಗುರುತಿಸಲಾಗಿದ್ದು, ಈ ಶಾಲೆಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.


ಭಾರತ ಸಂವಿಧಾನದ ಪೀಠಿಕೆಯನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರಾರ್ಥನಾ ಸಮಯದಲ್ಲಿ ಓದುವ ಮತ್ತು ಪ್ರತಿಜ್ಞೆ ಮಾಡುವ ಮೂಲಕ ಸಂವಿಧಾನದ ಮೂಲತತ್ವಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಸುಮಾರು 1 ಕೋಟಿ 4 ಲಕ್ಷ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಓದುತ್ತಿದ್ದಾರೆ. ಈಗಿನಿಂದಲೇ ಮಕ್ಕಳಿಗೆ ಸಮಾನತೆ, ಭ್ರಾತೃತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಭಿತ್ತಿ ನಾಡಿನ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಸರ್ಕಾರದ ಆಶಯವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಿಜ್ವಾನ್ ಅರ್ಷದ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಎಲ್ಲಾ ಕನ್ನಡಗರಿಗೆ ದೊಡ್ಡ ಹಬ್ಬವಾಗಿದೆ. ಕನ್ನಡ  ಭಾಷೆಗೆ ಶ್ರೇಷ್ಠ ಪರಂಪರೆ ಇತಿಹಾಸವಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. ನಮ್ಮ ಕಲೆ, ಸಂಸ್ಕಂತಿ, ನಾಡಿನ ಹಿರಿಮೆಯು ವಿಶ್ವದಲ್ಲೇ ಪ್ರಸಿದ್ದಿ ಪಡೆದಿದೆ. ಮಾಹಿತಿ ತಂತ್ರಜ್ಞಾನವನ್ನು ಬೆಂಗಳೂರಿನವರು ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ. ನಮ್ಮ ರಾಜ್ಯದ ನೆಲ, ಜಲ,  ಭಾಷೆ, ಮಣ್ಣಿನ ಕಣ-ಕಣದಲ್ಲೂ ಅಡಗಿದೆ ಎಂದರು.

ಸಮಾರಂಭದಲ್ಲಿ 16 ತಂಡಗಳು ಪಥಸಂಚಲನ ನಡೆಸಿದವು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಮಧು ಬಂಗಾರಪ್ಪ ಗೌರವ ವಂದನೆ ಸ್ವೀಕರಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕಂತಿಕ ಕಾರ್ಯಮಗಳನ್ನು ಏರ್ಪಡಿಸಲಾಗಿತ್ತು.

ಸಮಾರಂಭದಲ್ಲಿ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಶಾಸಕ ಎನ್.ಎ.ಹ್ಯಾರಿಸ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್‍ಕುಮಾರ್ ಸಿಂಗ್, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ವಿ.ತ್ರಿಲೋಕ್‍ಚಂದ್ರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by